êಧಾರವಾಡ: ವಿನಯ್ ಕುಲಕರ್ಣಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರು ಹಾಗೂ ಸಚಿವರಿದ್ದ ಸಮಯದಲ್ಲಿ ಕಾರ್ಮಿಕರಿಗಾಗಿ ಮಾಡಿದ ಕಾರ್ಯಗಳು ಹಾಗೂ ಅವರ ಮೇಲೆ ತೋರಿದ ಪ್ರೀತಿಯನ್ನು ಜನ ಇಂದಿಗೂ ಮರೆತಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹೇಳಿದರು.
ಧಾರವಾಡದ ಬೇಲೂರು ಹಾಗೂ ಹೆಗ್ಗೇರಿಯಲ್ಲಿ ವಿನಯ್ ಕುಲಕರ್ಣಿ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಈ ಭಾಗಕ್ಕೆ ಹೆಚ್ಚಿನ ಕೈಗಾರಿಕೆಗಳು ಬರಬೇಕು ಹಾಗೂ ಈ ಭಾಗದ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಉದ್ಯೋಗಗಳು ಸಿಗಬೇಕು ಎಂದು ವಿನಯ್ ಕುಲಕರ್ಣಿ ಸಾಕಷ್ಟು ಶ್ರಮವಹಿಸಿ ಕೈಗಾರಿಕೆಗಳನ್ನು ತರಲು ಒತ್ತು ಕೊಟ್ಟಿದ್ದರು. ಈಗಿನ ಬಿಜೆಪಿ ಸರ್ಕಾರ ಟಾಟಾ ಮಾರ್ಕೊಪೊಲೊ ಕಂಪೆನಿ ಉದ್ಯೋಗಿಗಳ ಮೇಲೆ ದಬ್ಬಾಳಿಕೆಯನ್ನೇ ಮಾಡುತ್ತ ಬಂದಿದೆ ಎಂದರು.
ಬೇಲೂರು ಹಾಗೂ ಹೆಗ್ಗೇರಿ ವ್ಯಾಪ್ತಿಯಲ್ಲಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟು ರೈತರು ಸ್ವಾವಲಂಭಿ ಜೀವನ ನಡೆಸುವಂತೆ ಮಾಡಿದರು. ಪ್ರಮುಖವಾಗಿ ಏನೇ ಅಪಘಾತಗಳಾದಾಗ ತುರ್ತಾಗಿ ಚಿಕಿತ್ಸೆ ಸಿಗಬೇಕು ಎಂದು ಉಚಿತ ಅಂಬ್ಯುಲೆನ್ಸ್‌ಗಳನ್ನು ನೀಡಿದ್ದನ್ನು ಜನ ಮರೆತಿಲ್ಲ. ಈಗಿನ ಶಾಸಕರು ದುಷ್ಟ ರಾಜಕಾರಣಕ್ಕೋಸ್ಕರ ವಿನಯ್ ಕುಲಕರ್ಣಿ ನೀಡಿದ ಅಂಬ್ಯುಲೆನ್ಸ್‌ಗಳನ್ನು ಮೂಲೆಗೆ ತಳ್ಳಿದ್ದಾರೆ ಎಂದರು.
ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದ ವಿನಯ್ ಕುಲಕರ್ಣಿ ಅವರು ವಿದ್ಯಾಕಾಶಿಯ ಹಿರಿಮೆ ಹೆಚ್ಚಿಸುವುದಕ್ಕೋಸ್ಕರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಿ ಧಾರವಾಡ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೊದಲ ಹತ್ತರ ಪಟ್ಟಿಯಲ್ಲಿ ಬರುವಂತೆ ಮಾಡಿದ್ದರು. ಹೀಗಾಗಿ ಈ ಬಾರಿ ಹೋದ ಕಡೆಯಲ್ಲೆಲ್ಲ ಮತ್ತೊಮ್ಮೆ ವಿನಯ್ ಕುಲಕರ್ಣಿ ಎಂಬ ಕೂಗು ಕೇಳಿ ಬರುತ್ತಿದೆ. ಸಮಗ್ರ ಧಾರವಾಡದ ಅಭಿವೃದ್ಧಿ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ವಿನಯ್ ಕುಲಕರ್ಣಿ ಹಾಗೂ ಕಾಂಗ್ರೆಸ್‌ನ್ನು ಜನ ಬೆಂಬಲಿಸಬೇಕು ಎಂದರು.
ಬೇಲೂರು ಹಾಗೂ ಹೆಗ್ಗೇರಿಯಲ್ಲಿ ಶಿವಲೀಲಾ ಕುಲಕರ್ಣಿ ಅವರು ಪಾದಯಾತ್ರೆ ಮಾಡುವ ಮೂಲಕ ಮನೆ, ಮನೆಗೆ ತೆರಳಿ ಮತಯಾಚನೆ ಮಾಡಿದರು.ಈ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಈಶ್ವರ ಶಿವಳ್ಳಿ,ಅರವಿಂದ ಏಗನಗೌಡರ,ಮುಖಂಡರಾದ ಆತ್ಮಾನಂದ ಅಂಗಡಿ,ಬಸು ಸಂದೂರಿ,ಮಂಜು ಜುಲ್ಪಿ,,ಜ್ಞಾನೇಶ್ವರ ಕಲಬಾವಿ,ರಾಜು ಮಲ್ಲಿಗವಾಡ,ವಿಠ್ಠಲ ಪರ್ವತಿ,ಶಿವಪ್ಪ ಕಡ್ಲಿಕೊಪ್ಪ,ಯಲ್ಲಪ್ಪ ಕಡ್ಲಿ,ಬಸವರಾಜ ಕುರಿ,ರೇಣುಕಾ ಯತ್ತಿನಗುಡ್ಡ,ಹಣಮವ್ವ ಕುರಿ,ಶ್ರೀದೇವಿ ತಳವಾರ ಸೇರಿದಂತೆ ಹೆಗ್ಗೇರಿ,ಬೇಲೂರಿನ ಗುರು ಹಿರಿಯರು ಕಾರ್ಯಕರ್ತರು ಭಾಗವಹಿಸಿದ್ದರು. ಇಲ್ಲಿ ಶಿವಲೀಲಾ ಕುಲಕರ್ಣಿಅವರಿಗೆ ಉತ್ತಮ ಜನ ಬೆಂಬಲ ವ್ಯಕ್ತವಾಯಿತು.