ಧಾರವಾಡ: ಸಲಿಂಗ ವಿವಾಹಕ್ಕೆ ನೀಡಿರುವ ಮಾನ್ಯತೆ ರದ್ದುಗೊಳಿಸುವಂತೆ ಧಾರವಾಡ ಸಂಸ್ಕೃತಿ ಟ್ರಸ್ಟ್ ಮಹಿಳಾ ಸದಸ್ಯರು ಮನವಿ ಮಾಡಿದ್ದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದ್ದಾರೆ. ಸಲಿಂಗ ವಿವಾಹವನ್ನು ಕಾನೂನುಬ ದ್ಧಗೊಳಿಸುವ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ವಿವಾಹಕ್ಕೆ ಎರಡು ಲಿಂಗಕ್ಕೆ ಸೇರಿದ ಇಬ್ಬರು ಸಂಗಾತಿಗಳು ಅಗತ್ಯವೇ ಎಂದು ಪ್ರಶ್ನಿಸಿದ್ದರು. ನಾವು ಈ ಸಲಿಂಗ ಸಂಬಂಧಗಳನ್ನು ಕೇವಲ ದೈಹಿಕ ಸಂಬಂಧಗಳಾಗಿ ನೋಡುತ್ತೇವೆ ಆದರೆ ಅಲ್ಲಿ ಹೆಚ್ಚು ಸ್ಥಿರವಾದ, ಭಾವನಾತ್ಮಕ ಸಂಬಂಧವೂ ಇರುತ್ತದೆ ಎಂದಿದ್ದರು. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕೇ ಅಥವಾ ಬೇಡವೇ ಎಂಬುದರ ವಾದ ಮತ್ತು ಪ್ರತಿವಾದವು ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿದೆ. ಸದ್ಯ ಸಲಿಂಗ ವಿವಾಹಕ್ಕೆ ನೀಡಿರುವ ಮಾನ್ಯತೆ ರದ್ದುಗೊಳಿಸುವಂತೆ ಧಾರವಾಡ ಸಂಸ್ಕೃತಿ ಟ್ರಸ್ಟ್ ಮಹಿಳಾ ಸದಸ್ಯರು ರಾಷ್ಟ್ರಪತಿಗೆ ಮನವಿ ರವಾನಿಸಿದ್ದಾರೆ.
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳು ಉದ್ಭವಿಸಿದೆ. ಹೀಗಾಗಿ ಪ್ರಶ್ನೆಗಳಿಗೆ ಸಮಂಜಸ ಹಾಗೂ ಸೂಕ್ತ ಉತ್ತರ ಪಡೆಯಲು ಮತ್ತು ತರ್ಕಬದ್ಧ ನಿರ್ಣಯವನ್ನು ತೆಗೆದುಕೊಳ್ಳಲು ಸಂಸತ್‌ಗೆ ಅವಕಾಶ ಮಾಡಿಕೊಡುವಂತೆ ಕೇಂದ್ರಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠಕ್ಕೆ, ಕೇಂದ್ರ ಸರ್ಕಾರ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಮನವಿಯನ್ನು ಮಾಡಿದ್ದಾರೆ. ಸುಪ್ರೀಂ ಕೋರ್ಟ್ ವ್ಯವಹರಿಸುತ್ತಿರುವ ಈ ವಿಚಾರವು ತೀರಾ ಸೂಕ್ಷ್ಮವಾಗಿದೆ. ಅಲ್ಲದೆ, ಸಮಾಜದ ಮೇಲೆ ತೀವ್ರತರದ ಪರಿಣಾಮವನ್ನೂ ಬೀರುತ್ತದೆ. ಮುಖ್ಯವಾಗಿ ಮದುವೆ ಎಂದರೇನು? ಯಾರ ನಡುವೆ ನಡೆಯುತ್ತದೆ? ಎಂಬುದೇ ಪ್ರಶ್ನೆಯಾಗಿದೆ. ಈ ಸಂಬಂಧಿಸಿದಂತೆ ಸಮಾಜದಲ್ಲಿ ಮತ್ತು ವಿವಿಧ ರಾಜ್ಯಗಳ ಸದನಗಳಲ್ಲಿ ಚರ್ಚೆಯ ಅಗತ್ಯವಿರುವ ಹಿನ್ನೆಲೆ ಸಂಸತ್ತಿನಲ್ಲಿ ಈ ವಿಚಾರದ ನಿರ್ಣಯಕ್ಕೆ ಅನುವು ಮಾಡಿಕೊಡಬೇಕು ಎಂದು ಕೋರಿದ್ದಾರೆ.