ಹುಬ್ಬಳ್ಳಿ: ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯವೆದ್ದಿರುವ ತವನಪ್ಪ ಅಷ್ಟಗಿ ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಧಾರವಾಡದಲ್ಲಿರುವ ತವನಪ್ಪ ಅಷ್ಟಗಿ ಅವರ ನಿವಾಸಕ್ಕೆ ಶಾಸಕ ಸತೀಶ ಜಾರಕಿಹೊಳಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಭೇಟಿ ನೀಡಿ ತವನಪ್ಪ ಅಷ್ಟಗಿ ಅವರನ್ನು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದಾರೆ.
ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತವನಪ್ಪ ಬಂಡಾಯವೆದ್ದು ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರ ವಿರುದ್ಧವೇ ಪಕ್ಷೇತರವಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಜಗದೀಶ ಶೆಟ್ಟರ್ ಅವರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಕೊಡುವಾಗಲೂ ಅವರ ಜೊತೆಗಿದ್ದ ತವನಪ್ಪ ಅಷ್ಟಗಿ, ಕಾಂಗ್ರೆಸ್ ಸೇರ್ಪಡೆಗೊಂಡಿರಲಿಲ್ಲ. ಇದೀಗ ನಾಮಪತ್ರ ಸಲ್ಲಿಸಿದ ನಂತರ ವಿನಯ್ ಕುಲಕರ್ಣಿ ಅವರ ಗೆಲುವಿಗೆ ಶ್ರಮಿಸುವಂತೆ ಕಾಂಗ್ರೆಸ್ ಮುಖಂಡರು ಮಾತುಕತೆ ನಡೆಸುವ ಸಾಧ್ಯತೆ ಇದೆ. ಆಶ್ಚರ್ಯವೆಂದರೆ ವಿನಯ್ ಕುಲಕರ್ಣಿ ಅವರ ಸಹೋದರ ವಿಜಯ್ ಕುಲಕರ್ಣಿ ಕೂಡ ತವನಪ್ಪ ಅಷ್ಟಗಿ ಅವರ ನಿವಾಸಕ್ಕೆ ಭೇಟಿ ಕೊಟ್ಟಿದ್ದರು.