Breaking News

ಈ ಚುನಾವಣೆ ನನಗೆ ಅಗ್ನಿ ಪರೀಕ್ಷೆ: ಜಗದೀಶ್ ಶೆಟ್ಟರ್

Spread the love

ಹುಬ್ಬಳ್ಳಿ: ಈ ಬಾರಿಯ ಚುನಾವಣೆಯಲ್ಲಿ ನಾನು ಸ್ವಾಭಿಮಾನಕ್ಕಾಗಿ ಸ್ಪರ್ಧೆ ಮಾಡಿದ್ದೇನೆಯೇ ಹೊರತು, ಯಾವುದೇ ಅಧಿಕಾರಕ್ಕಾಗಿ ಅಲ್ಲ. ಈ ಅಗ್ನಿ ಪರೀಕ್ಷೆಯನ್ನು ಗೆಲ್ಲಲು ನೀವೆಲ್ಲರೂ ನನ್ನನ್ನು ಬೆಂಬಲಿಸಬೇಕು ಎಂದು‌ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಮನವಿ ಮಾಡಿದರು.

ನಗರದ ಹೊಸ‌ ಕೋರ್ಟ್ ಸಂಕೀರ್ಣದಲ್ಲಿ ವಕೀಲರ ಸಂಘ ಶುಕ್ರವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಮತ್ತು ಮತದಾರರ ಸ್ವಾಭಿಮಾನದ ಪ್ರಶ್ನೆಯಾಗಿರುವುದರಿಂದ, ಇಬ್ಬರ ಗೌರವ ಉಳಿಸುವುದಕ್ಕಾಗಿ‌ ಸ್ಪರ್ಧೆ ಮಾಡಿದ್ದೇನೆ ಎಂದರು.

ಪಕ್ಷ ನಿಷ್ಠನಾಗಿದ್ದ ನಾನು ಅಧಿಕಾರಕ್ಕಾಗಿ ಕಾಂಗ್ರೆಸ್‌ಗೆ ಹೋಗಿದ್ದೇನೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡಲಾಗುತ್ತಿದೆ. ಕಾರ್ಯಕರ್ತರೇ ಇಲ್ಲದ ಜಿಲ್ಲೆ ಮತ್ತು ಉತ್ತರ ಕರ್ನಾಟಕದಲ್ಲಿ ಬಿಜೆಪಿಯನ್ನು‌ ಕಟ್ಟಿ ಬೆಳೆಸಿದ್ದೇನೆ. ಪಕ್ಷ ಕೊಟ್ಟ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಪಕ್ಷದ ಜೊತೆಗೆ‌ ನಾನೂ ಬೆಳೆದಿದ್ದೇನೆ ಎಂದು ತಿಳಿಸಿದರು.

ಆರು ಸಲ ಗೆದ್ದಿರುವ ನಾನು ಎಲ್ಲಾ ಜಾತಿ ಮತ್ತು ಧರ್ಮದವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಕ್ಷೇತ್ರದಲ್ಲಿ ಸೌಹಾರ್ದ ವಾತಾವರಣ ಕಾಯ್ದುಕೊಳ್ಳುವ‌ ಜೊತೆಗೆ, ನಗರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ.‌ ಬಿಜೆಪಿ ಅಭ್ಯರ್ಥಿಗೆ ಜನರ ಪರಿಚಯ‌ ಇಲ್ಲ. ಆದರೆ, ನನಗೆ ಕ್ಷೇತ್ರದ ಎಲ್ಲಾ ಜನರ ಪರಿಚಯವಿದೆ.‌ ಇದುವರೆಗಿನ ನನ್ನ ಗೆಲುವಿನಲ್ಲಿ ವಕೀಲರ ಪಾತ್ರವೂ ದೊಡ್ಡದು. ‌ಹಾಗಾಗಿ, ಏಳನೇ ಸಲ ಗೆಲ್ಲುವುದು ನಿಶ್ವಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ನಿರ್ಧಾರ ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದಲ್ಲಿ ತಲ್ಲಣ ಮೂಡಿಸಿದೆ. ಪಕ್ಷದೊಳಗೆ ಕೆಲವರೇ ಹೊಂದಿರುವ ಹಿಡಿತ ಹಾಗೂ ಹಿರಿಯರಿಗೆ ಆಗುತ್ತಿರುವ ಅನ್ಯಾಯವನ್ನು ಜಗಜ್ಜಾಹೀರು ಮಾಡಿದೆ. ಅದರ ಪ್ರತಿಫಲವನ್ನು ಅನುಭವಿಸಲಿದ್ದಾರೆ ಎಂದರು.

ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ, ಮಹಾನಗರ ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ಅವರನ್ನು ಪೊಲೀಸರು ಗೂಂಡಾ‌ ಕಾಯ್ದೆಯಡಿ ಬಂಧಿಸಿ ಜೈಲಿಗೆ‌ ಕಳಿಸಿರುವುದಕ್ಕೆ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು. ‌

ಈ‌ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಹರಿಹಾಯ್ದ ಶೆಟ್ಟರ್, ಅಧಿಕಾರ ಯಾರಿಗೂ ಶಾಶ್ವತವಲ್ಲ. ಈ ನಿಮ್ಮ ರಾಜಕೀಯ ದಮನಕಾರಿ ನೀತಿ , ನಿಮಗೇ‌ ತಿರುಗುಬಾ ಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.ರೌಡಿಸಂ ಚಟುವಟಿಕೆ ಬಿಡಿ ಎಂದು ಹಿಂದೊಮ್ಮೆ ಚೇತನ ಅವರಿಗೆ ಬುದ್ದಿ ಹೇಳಿದ್ದೆ. ಅವರ ಸಹ ಎಲ್ಲಾ ಬಿಟ್ಟು ಜನಸೇವೆಯಲ್ಲಿ ತೊಡಗಿಸಿ ಕೊಂಡಿದ್ದರು. ರೌಡಿಸಂ ವಿರುದ್ಧ ಮಾತನಾಡುವ ಬಿಜೆಪಿಯವರು, ರೌಡಿ ಶೀಟರ್ ಗೆ ಈ ಸಲ‌ ಟಿಕೆಟ್ ಕೊಡಿಸಿದ್ದಾರೆ. ಮಂಡ್ಯದಲ್ಲಿ ರೌಡಿ ಫೈಟರ್ ರವಿ ಎಂಬಾತನಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದನ್ನು ಮರೆತಿದ್ದಾರೆಯೇ ಎಂದು ಪ್ರಶ್ನಿಸಿದರು.

ಪಕ್ಷದ ಮುಖಂಡ ಪಿ.ಎಚ್. ನೀರಲಕೇರಿ ಮಾತನಾಡಿ, ಈ ಬಾರಿಯ ಚುನಾವಣೆ ವಿಶೇಷವಾದುದು.‌ ಶೆಟ್ಟರ್ ಅವರಿಂದ ಕಾಂಗ್ರೆಸ್ ಗೆ ಹೊಸ ಶಕ್ತಿ ಬಂದಿದೆ. ರಾಜಕಾರಣದಲ್ಲಿ ವಕೀಲರು ವಿರಳವಾಗಿದ್ದು, ಶೆಟ್ಟರ್ ವಕೀಲರಾಗಿದ್ದರು ಎಂಬುದು ನಮ್ಮ ಹೆಮ್ಮೆ. ಅವರಿಂದಾಗಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಅವರ ವಿರುದ್ಧ ಹಲವು ಶಕ್ತಿಗಳು ಮಸಲತ್ತು ನಡೆಸುತ್ತಿವೆ. ಅವೆಲ್ಲವನ್ನೂ ಮೆಟ್ಟಿ ಶೆಟ್ಟರ್ ಅವರನ್ನು ಗೆಲ್ಲಿಸಬೇಕಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಸಿ.ಆರ್. ಪಾಟೀಲ, ಹಿಂದಿನ ಆರು ಚುನಾವಣೆಗಳಲ್ಲಿ ವಕೀಲರು ನಿಮ್ಮೊಂದಿಗೆ ಇದ್ದೆವು. ಬದಲಾವಣೆಗೆ ನಾಂದಿ‌ ಹಾಡಲು ಮುಂದಾಗಿರುವ ಈ ಸಲದ ಚುನಾವಣೆಯಲ್ಲಿ ಸಹ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು.

ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಹಾಗೂ ವಕೀಲರು ಇದ್ದರು.


Spread the love

About Karnataka Junction

[ajax_load_more]

Check Also

ತಪ್ಪು ಮಾಡಿದವರಿಗೆ ಹೊಟ್ಟೆಯುರಿ ಆಗಿದೆ: ನಾರಾಯಣಸ್ವಾಮಿ

Spread the love  ಹುಬ್ಬಳ್ಳಿ: ‘ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ …

Leave a Reply

error: Content is protected !!