- ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಶಂಕರ ಪಾಟೀಲ ಮುನೇನಕೊಪ್ಪ ಅವರು ಮತ್ತೊಂದು ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇಂದು ಶಕ್ತಿ ಪ್ರದರ್ಶನ ಮಾಡುವುದರೊಂದಿಗೆ ಮುನೇನಕೊಪ್ಪ ಅವರು ಅಧಿಕೃತವಾಗಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನವಲಗುಂದದ ಗಣಪತಿ ದೇವಸ್ಥಾನದಿಂದ ತಹಶೀಲ್ದಾರ ಕಚೇರಿವರೆಗೂ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ನವಲಗುಂದ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದ ಲಕ್ಷಾಂತರ ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ತೆರೆದ ವಾಹನದ ಮೂಲಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಅದ್ಧೂರಿ ಮೆರವಣಿಗೆ ಮಾಡಿದರು. ಈ ಮೆರವಣಿಗೆಯಲ್ಲಿ ಮಾಜಿ ಸಿಎಂ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಕೂಡ ಪಾಲ್ಗೊಂಡಿದ್ದರು. ಮಧ್ಯಾಹ್ನ 2-30 ರ ಸುಮಾರಿಗೆ ಮೆರವಣಿಗೆಯು ತಹಶೀಲ್ದಾರ ಕಚೇರಿಗೆ ಆಗಮಿಸಿತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನೇರವಾಗಿ ತಹಶೀಲ್ದಾರ ಕಚೇರಿಗೆ ಬಂದು ಶಂಕರ ಪಾಟೀಲ ಮುನೇನಕೊಪ್ಪ ಅವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಸಾಕ್ಷಿಯಾದರು.