ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಫೆ. ೧೨ ರಂದು ಬೆಂಗಳೂರು ಚಲೋ
ಹುಬ್ಬಳ್ಳಿ: ಬೆಳೆ ವಿಮೆ, ಬೆಳೆ ಪರಿಹಾರ ಪ್ರತಿ ಹೇಕ್ಟರಿಗೆ ೨೫ ಸಾವಿರ ನಿಗದಿಪಡಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಫೆ. ೧೨ ರಂದು ಬೆಂಗಳೂರು ಚಲೋ ರ್ಯಾಲಿಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಹೇಳಿದರು.
ಬುಧವಾರಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಭಾಗದ ರೈತರು ಹಾಗೂ ಸಂಘದ ಸದಸ್ಯರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯಿಂದ ೨೦೦೦ ಸಾವಿರ ಮಂದಿ ವಿಧಾನ ಸೌಧ ಮುತ್ತಿಗೆ ಹಾಕುತ್ತೇವೆ ಎಂದರು.
ಒಂದು ಹೆಕ್ಟೇರ್ ೨ ಸಾವಿರ ರೂ. ಖಾತೆಗೆ ಹಾಕಲಾಗುತ್ತಿದೆ. ಅದಕ್ಕೆ ಪ್ರತಿ ಹೆಕ್ಟೇರ್ ಗೆ ೨೫ ಸಾವಿರ ನೀಡಬೇಕು. ಮಹದಾಯಿ ಸೇರಿದಂತೆ ವಿವಿಧ ನೀರಾವರಿ ಯೋಜನೆ ಬಗ್ಗೆ ಅನುದಾನ ನೀಡಬೇಕು. ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹ ನೀರಾವರಿ ಮಂತ್ರಿಗಳು ಸ್ಪಂದಿಸುತ್ತಿಲ್ಲ. ಇಲ್ಲವಾದಲ್ಲಿ ರಾಜೀನಾಮೆ ನೀಡಬೇಕು. ಬೇರೆ ಕ್ರಿಯಾಶೀಲ ಮಂತ್ರಿಯನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.
ಮಹದಾಯಿ ಯೋಜನೆ ಆರಂಭಿಸದಿದ್ದರೆ ಹುಬ್ಬಳ್ಳಿ ಧಾರವಾಡ ಬಂದ್ ಮಾಡಲಾಗುವುದು. ರಾಜ್ಯ ಸರ್ಕಾರ ರೈತರ ೩ ಕೃಷಿ ಕಾಯ್ದೆ ಹಿಂಪಡೆಯಬೇಕು, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿ ತೆಗೆದುಕೊಂಡ ರೈತರ ಸಾಲ ಮನ್ನಾ ಮಾಡಬೇಕು, ಮಹದಾಯಿ, ಕಳಸಾ ಬಂಡೂರಿ ನೀರಾವರಿ ಯೋಜನೆ ಶೀಘ್ರವಾಗಿ ಜಾರಿ ಮಾಡಬೇಕು, ಬೆಣ್ಣೆ ಹಳ್ಳದ ಹಾನಿತಪ್ಪಿಸಬೇಕು, ಶಾಶ್ವತ ಪರಿಹಾರ ಕಲ್ಪಿಸಬೇಕು, ಬೆಣ್ಣೆ ಹಳ್ಳದ ನೀರು ರೈತರಿಗೆ ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳಬೇಕು,ಕೃಷ್ಣ ನದಿ ಹಾಗೂ ಆಳಮಟ್ಟಿ ಡ್ಯಾಮ್ ಜಲಾಶಯ ಎತ್ತರಿಸಬೇಕು ಹಾಗೂ ನವಲಿ ಜಲಾಶಯ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುನ್ನೂರ, ಅನ್ನಪೂರ್ಣ ಪಾಟೀಲ, ಬಸಪ್ಪ ಸಂಬೋಜಿ, ಹಜರತ್ ಅಲಿ ಜೋಡಮನಿ, ಫಕೀರಪ್ಪ ಪೂಜಾತ ಇದ್ದರು.