Breaking News

ಇಂದು ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿ

Spread the love

ಬೆಂಗಳೂರು: ಇಂದಿನಿಂದ ಕಠಿಣ ನಿರ್ಬಂಧಗಳಿರುವ ಲಾಕ್‌ಡೌನ್ 2.O ರಾಜ್ಯಾದ್ಯಂತ ಜಾರಿಯಾಗಲಿದೆ.
ಲಾಕ್‌ಡೌನ್ ಎಷ್ಟು ಕಠಿಣವಾಗಿರಲಿದೆ ಎಂಬ ಬಗ್ಗೆ ಸರ್ಕಾರ ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ. ಸೋಮವಾರದಿಂದ 14 ದಿನಗಳ ಕಾಲ ರಾಜ್ಯಾದ್ಯಂತ ಕಠಿಣ ಲಾಕ್‌ಡೌನ್ ಜಾರಿಯಾಗಲಿದೆ. ಸಂಪೂರ್ಣ ಲಾಕ್‌ಡೌನ್ ಅಲ್ಲವಾದರೂ ಈ ಮೊದಲಿದ್ದ ಕರ್ಫ್ಯೂಗಿಂತ ಕಠಿಣ ನಿಯಮಗಳು ಜಾರಿಯಾಗಲಿವೆ. ಈಗಾಗಲೇ ಪೊಲೀಸರು ಇಂದಿನಿಂದ ಜಾರಿಯಾಗಲಿರುವ ಲಾಕ್‌ಡೌನ್ ಹೇಗಿರಲಿದೆ ಎಂಬ ಸಂಕೇತವನ್ನು ಲಾಠಿ ಏಟಿನ ಮೂಲಕ ತೋರಿಸಿದ್ದಾರೆ.ಲಾಕ್‌ಡೌನ್ ವೇಳೆ ಅನಗತ್ಯ ವಾಹನ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗುತ್ತದೆ. ಅಗತ್ಯ ವಸ್ತುಗಳ ಖರೀದಿಗೂ ಜನರು ವಾಹನಗಳಲ್ಲಿ ಓಡಾಟ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ನಡೆದುಕೊಂಡೇ ಹೋಗಿ ಬರಬೇಕು.ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಕಿರಾಣಿ ಅಂಗಡಿ, ಮದ್ಯದ ಅಂಗಡಿ, ಮಾಂಸ, ತರಕಾರಿ ಅಂಗಡಿ ತೆರೆಯಲಿದ್ದು, ಬಳಿಕ ವ್ಯಾಪಾರಕ್ಕೆ ಯಾವುದೇ ಅವಕಾಶ ಇಲ್ಲ. ಈ ವೇಳೆ ಸಾರ್ವಜನಿಕರು ಖರೀದಿಗಾಗಿ ಅಂಗಡಿಗಳಿಗೆ ನಡೆದುಕೊಂಡೇ ಹೋಗಬೇಕು. ವಾಹನ ಬಳಕೆಯನ್ನು ನಿಷೇಧಿಸಲಾಗಿದೆ. ಹೀಗಾಗಿ ಬೆಳಗ್ಗೆ 10 ಗಂಟೆಯ ಬಳಿಕ ಜನರ ಓಡಾಟಕ್ಕೆ ಸಪೂರ್ಣ ಬ್ರೇಕ್ ಹಾಕಲಾಗುತ್ತದೆ.ಯಾರೆಲ್ಲಾ ಲಾಕ್‌ಡೌನ್ ವೇಳೆ ಓಡಾಡಬಹುದು?ಅಗತ್ಯ ಸೇವೆ ಒದಗಿಸುವ ವೈದ್ಯಕೀಯ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಗತ್ಯ ಸೇವೆ ನೀಡುವ ಕಚೇರಿಗಳ ಸಿಬ್ಬಂದಿ, ಇ-ಕಾಮರ್ಸ್, ಹೋಮ್ ಡೆಲಿವರಿ ಮಾಡುವ ಸಿಬ್ಬಂದಿ, ದೂರ ಸಂಪರ್ಕ, ಇಂಟರ್​ನೆಟ್ ಸೇವೆ, ಪ್ರಸಾರ ಮತ್ತು ಕೇಬಲ್ ಸೇವಾ ಸಿಬ್ಬಂದಿ, ಐಟಿ ಮತ್ತು ಐಟಿಇಎಸ್ ಕಂಪನಿಗಳ ಅಗತ್ಯ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ ಈ ಸಿಬ್ಬಂದಿ ಕಂಪನಿ ನೀಡಿರುವ ಐಡಿ ಕಾರ್ಡನ್ನು ತೋರಿಸಬೇಕು. ಎಲ್ಲ ಆರೋಗ್ಯ ಸೇವಾ ಸೌಲಭ್ಯಗಳು ಮತ್ತು ಸಂಬಂಧಿತ ಸೇವೆಗಳಿಗೆ ಅವಕಾಶ ಇರಲಿದೆ.ಓದಿ: ಭಾರತದ ಹೆಸರಲ್ಲೇ ಎರಡು ಕ್ರಿಕೆಟ್​ ತಂಡ: ಒಂದು ಇಂಗ್ಲೆಂಡ್​ನಲ್ಲಿ, ಮತ್ತೊಂದು ಶ್ರೀಲಂಕಾದಲ್ಲಿ!ಎಲ್ಲಾ ಕೃಷಿ ಮತ್ತು ಪೂರಕ ಚಟುವಟಿಕೆಗಳು, ಮೀನುಗಾರಿಕೆ, ಕೋಳಿ ಸಾಕಾಣಿಕೆ, ಮಾಂಸ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು. ಎಲ್ಲಾ ಸರಕು ಸಾಗಾಣಿಕೆ ವಾಹನಗಳ ಮುಕ್ತ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಲಸಿಕೆ ಹಾಕಿಸಿಕೊಳ್ಳುವವರು, ಆಸ್ಪತ್ರೆಗೆ ಹೋಗುವ ರೋಗಿಗಳು ಮತ್ತು ಅವರ ಸಂಬಂಧಿಗಳು ಆಟೋ, ಟ್ಯಾಕ್ಸಿ ಅಥವಾ ಖಾಸಗಿ ವಾಹನ ಮೂಲಕ ಹೋಗಲು ಅನುಮತಿ ಇದೆ. ಆದರೆ ಅವರು ಸೂಕ್ತ ದಾಖಲೆಗಳನ್ನು ತೋರಿಸಲೇಬೇಕು. ಈಗಾಗಲೇ ನಿಗದಿಯಾಗಿರುವ ವಿಮಾನ ಮತ್ತು ರೈಲುಗಳು ಯಥಾವತ್ ಆಗಿ ಸಂಚಾರ ನಡೆಸಲಿವೆ. ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳು ತುರ್ತು ಸಂದರ್ಭಗಳಲ್ಲಿ ಹಾಗೂ ಮಾರ್ಗಸೂಚಿಯಲ್ಲಿ ಅನುಮತಿಸಿದ ರೀತಿಯಲ್ಲಿ ಸಂಚರಿಸಲು ಅವಕಾಶವಿದೆ. ಎಲ್ಲ ಸರಕು ಸಾಗಾಣಿಕೆ ವಾಹನಗಳ ಮುಕ್ತ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ವಿಮಾನ, ರೈಲು ನಿಲ್ದಾಣಗಳಿಂದ ಪ್ರಯಾಣಿಕರನ್ನು ಕರೆತರಲು ಆಟೋ, ಟ್ಯಾಕ್ಸಿ, ಓಲಾ, ಉಬರ್ ಬಳಸಬಹುದು. ಆದರೆ ಪ್ರಯಾಣ ಟಿಕೆಟ್ ತೋರಿಸಬೇಕು. ಇಲ್ಲವಾದರೆ ವಾಹನ ಜಪ್ತಿ ಮಾಡಲಾಗುತ್ತದೆ.ಅಂಗಡಿ ಮುಂಗಟ್ಟುಗಳಿಗಿರುವ ನಿರ್ಬಂಧ ಏನು?ಅಗತ್ಯ ವಸ್ತುಗಳ ಅಂಗಡಿಗಳಿಗೆ ನಿರ್ಬಂಧಿತ ಅವಕಾಶ ನೀಡಲಾಗಿದೆ. ಹೋಟೆಲ್​ಗಳು, ರೆಸ್ಟೋರೆಂಟ್​ಗಳು ಮತ್ತು ಆಹಾರ ಮಳಿಗೆಗಳು ಪಾರ್ಸೆಲ್ ಹಾಗೂ ಹೋಂ ಡೆಲಿವರಿ ಸೇವೆಗಳನ್ನು ಮಾತ್ರ ಒದಗಿಸಲು ಅನುಮತಿಸಲಾಗುತ್ತದೆ. ಆಹಾರ ಸಾಮಗ್ರಿ, ದಿನಸಿ ವಸ್ತುಗಳು, ಹಣ್ಣು ಮತ್ತು ತರಕಾರಿ, ಮಾಂಸ ಮತ್ತು ಮೀನಿನ ಮಳಿಗೆಗಳು ಮತ್ತು ಪಶು ಆಹಾರದ ಮಳಿಗೆಗಳು ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ತೆರೆಯಲಿವೆ. ಹಾಲಿನ ಬೂತ್​ಗಳು ಹಾಗೂ ತಳ್ಳುಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಅವಕಾಶ ಇರಲಿದೆ.
ನ್ಯಾಯಬೆಲೆ ಅಂಗಡಿಗಳು ತೆರೆಯಲಿವೆ. ಮದ್ಯ ಮಾರಾಟ ಮಳಿಗೆಗಳು ಕೇವಲ ಪಾರ್ಸೆಲ್ ಸೇವೆಗಾಗಿ ಬೆಳಗ್ಗೆ 6 ರಿಂದ 10ರ ವರೆಗೆ ತೆರೆಯಲಿವೆ. ಆದರೆ, ದಿನಸಿ, ಹಾಲು, ಅಗತ್ಯ ವಸ್ತು ಖರೀದಿಸಲು ಜನರು ನಡೆದುಕೊಂಡೇ ಹೋಗಬೇಕು. ವಾಹನ ಬಳಸುವ ಹಾಗಿಲ್ಲ. ವಾಹನ ಬಳಸಿದರೆ ಪೊಲೀಸರು ಜಪ್ತಿ ಮಾಡಲಿದ್ದಾರೆ.ಕೈಗಾರಿಕೆಗಳಿಗೆ ಇರುವ ನಿರ್ಬಂಧ ಏನು?ಸ್ಥಳದಲ್ಲಿಯೇ ಕಾರ್ಮಿಕರು/ ಸಿಬ್ಬಂದಿ ಲಭ್ಯವಿರುವ ಕೈಗಾರಿಕೆಗಳು/ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸಬಹುದು. ಕಾರ್ಮಿಕರು ವಾಹಗಳ ಮೂಲಕ ಕಾರ್ಖಾನೆಗಳಿಗೆ ಬರುವ ಹಾಗಿಲ್ಲ. ಅಗತ್ಯ ವಸ್ತುಗಳ ತಯಾರಿಕಾ ಘಟಕಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗುತ್ತದೆ. ನಿರಂತರ ಕಾರ್ಯನಿ ರ್ವಹಣೆಯ ಅಗತ್ಯವಿರುವ ತಯಾರಿಕಾ ಘಟಕಗಳಿಗೆ ಅನುಮತಿ ನೀಡಲಾಗಿದೆ. ಸ್ಥಳದಲ್ಲಿಯೇ ಕಾರ್ಮಿಕರು, ಕೆಲಸಗಾರರನ್ನು ಹೊಂದಿರುವ ನಿರ್ಮಾಣ ಚಟುವಟಿಕೆಗಳಿಗೆ ಹಾಗೂ ರಸ್ತೆ ಕಾಮಗಾರಿಗಳಿಗೆ ಅನುಮತಿ ನೀಡಲಾಗಿದೆ. ಅದಿರು ಗಣಿಗಾರಿಕೆ, ಸಿಮೆಂಟ್ ಕಾರ್ಖಾನೆಗೆ ಬಳಸುವ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ.ಮದುವೆ ಸಮಾರಂಭಕ್ಕೆ ಏನಿದೆ ನಿರ್ಬಂಧ?ಪೂರ್ವ ನಿಗದಿತ ಮದುವೆ ಸಮಾರಂಭವನ್ನು ಅವರ ಮನೆಗಳಲ್ಲೇ ಕೈಗೊಳ್ಳಲು ಅನುಮತಿ ನೀಡಲಾಗಿದೆ. ಗರಿಷ್ಠ 40 ಮಂದಿ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಮದುವೆ ಸಮಾರಂಭಕ್ಕೆ ಅನುಮತಿಯನ್ನು ಸಂಬಂಧಿತ ವ್ಯಕ್ತಿ ಸಹಿ ಹಾಕಿದ ಅರ್ಜಿಯನ್ನು ಮದುವೆ ಆಮಂತ್ರಣ ಪತ್ರದ ಜೊತೆಗೆ ಅಥವಾ ಇತರ ಸೂಕ್ತ ದಾಖಲಾತಿಯೊಂದಿಗೆ ಬಿಬಿಎಂಪಿ ಜಂಟಿ ಆಯುಕ್ತರು ಹಾಗೂ ಜಿಲ್ಲೆಗಳಲ್ಲಿನ ತಹಶೀಲ್ದಾರ್​ರಿಂದ ಪಡೆಯಬೇಕು. ಜಂಟಿ ಆಯುಕ್ತರು ಅಥವಾ ತಹಶೀಲ್ದಾರರು ಅನುಮತಿ ನೀಡಿದ ಬಳಿಕ 40 ಮಂದಿಗೆ ಮಾತ್ರ ಪಾಸ್​ಗಳನ್ನು ನೀಡಬೇಕು. ಪಾಸ್ ಹೊಂದಿದವರು ಮಾತ್ರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಬಹುದು. ಈ ಪಾಸ್​ಗಳನ್ನು ವರ್ಗಾವಣೆ ಮಾಡುವಂತಿಲ್ಲ. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.ಯಾವುದಕ್ಕೆ ಸಂಪೂರ್ಣ ನಿಷೇಧ?ಅಗತ್ಯ ವಸ್ತುಗಳ ಖರೀದಿಗಾಗಿ ವಾಹನ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಶಾಲೆ, ಕಾಲೇಜುಗಳು, ಶಿಕ್ಷಣ, ಕೋಚಿಂಗ್ ಸಂಸ್ಥೆಗಳ ತರಗತಿಗಳು ಸಂಪೂರ್ಣ ಬಂದ್ ಆಗಿರಲಿದೆ. ಸಾರ್ವಜನಿಕ ಬಸ್, ಮೆಟ್ರೋ ಓಡಾಟ ಸಂಪೂರ್ಣ ಸ್ಥಗಿತವಾಗಿರಲಿದೆ. ಸಿನೆಮಾ ಹಾಲ್​ಗಳು, ಶಾಪಿಂಗ್ ಮಾಲ್​ಗಳು, ಜಿಮ್ನೇಸಿಯಂಗಳು, ಕ್ರೀಡಾ ಸಂಕೀರ್ಣಗಳು, ಕ್ರೀಡಾಂಗಣ, ಈಜುಕೊಳ, ಉದ್ಯಾನವನಗಳು, ಮನರಂಜನಾ ಪಾರ್ಕ್​ಗಳು, ಕ್ಲಬ್​ಗಳು, ಥಿಯೇಟರ್​ಗಳು, ಬಾರ್​ಗಳು ಮತ್ತು ಸಭಾಂಗಣ, ಸಮುದಾಯ ಭವನಗಳಂತಹ ಸ್ಥಳಗಳು ಮುಚ್ಚಲಿವೆ.
ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಮೊದಲಾದ ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳು, ಸಮಾವೇಶಗಳನ್ನು ನಿಷೇಧಿಸಲಾಗಿದೆ. ಎಲ್ಲಾ ಧಾರ್ಮಿಕ ಸ್ಥಳಗಳು/ ಪೂಜಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ರಸ್ತೆ ಮೂಲಕ ಅಂತರ ಜಿಲ್ಲೆ ಹಾಗೂ ಅಂತಾರಾಜ್ಯ ಸಾರ್ವಜನಿಕರ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗುತ್ತದೆ.ಅಂತ್ಯ ಸಂಸ್ಕಾರಕ್ಕೆ ಮಿತಿ:ಲಾಕ್‌ಡೌನ್ ವೇಳೆ ಅಂತ್ಯಸಂಸ್ಕಾರಕ್ಕೆ ನಿರ್ಬಂಧಿತ ಅನುಮತಿ ನೀಡಲಾಗಿದೆ. ಅಂತ್ಯಸಂಸ್ಕಾರದಲ್ಲಿ ಗರಿಷ್ಠ 5 ಜನರು ಪಾಲ್ಗೊಳ್ಳಲು ಮಾತ್ರ ಅವಕಾಶ ಇದೆ.‌ ಆದರೆ ಕಂಪ್ಲೀಟ್ ಲಾಕ್ ಡೌನ್ ಅಂತಾರೆ ಇದು ಯಶಸ್ಸು ಆಗತ್ತಾ ಇಲ್ಲಾ ನೋಡಬೇಕು.


Spread the love

About Karnataka Junction

    Check Also

    ಹಿಂದೂ ಹಬ್ಬಗಳು ಬಂದಾಗ ಮಾತ್ರ ಕಾಂಗ್ರೆಸ್ಸಿಗೆ ಕಾನೂನು ನೆನಪಾಗುತ್ತೆ: ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್

    Spread the loveಬೆಂಗಳೂರು: ಕಾಂಗ್ರೆಸ್‌ನವರಿಗೆ ಹಿಂದೂ ಹಬ್ಬ ಬಂದಾಗ ಮಾತ್ರ ನೀತಿ, ನಿಯಮ, ಕಟ್ಟಳೆಗಳು ನೆನಪಿಗೆ ಬಂದುಬಿಡುತ್ತವೆ! ತಮ್ಮ ಬಾಂಧವರು …

    Leave a Reply

    error: Content is protected !!