ಹುಬ್ಬಳ್ಳಿ: ಬಾಡಿಗೆ ನೆಪದಲ್ಲಿ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ದರೋಡೆ ಮಾಡಿದ್ದ ಮೂವರಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ ಎಂಟು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹20 ಸಾವಿರ ದಂಡ ವಿಧಿಸಿದೆ.
ಶಿರಾಜ ಅಹ್ಮದ ಪಣಿಬಂದ, ಅವಿನಾಶ ಪವಾರ ಹಾಗೂ ಮಂಜುನಾಥ ಪವಾರ ಶಿಕ್ಷೆಗೊಳಗಾದ ಅಪರಾಧಿಗಳು. ನಗರದ ಚನ್ನಮ್ಮ ವೃತ್ತದ ಈದ್ಗಾ ಮೈದಾನದಲ್ಲಿ ಕಾರು ನಿಲ್ಲಿಸಿಕೊಂಡಿದ್ದ ಗಣೇಶ ಭಗವಂತಪ್ಪ ಜುಲ್ಲಾಪುರ ಅವರ ಬಳಿಗೆ ಯುವತಿಯೊಂದಿಗೆ ಬಂದಿದ್ದ ಶಿರಾಜ, ಉತ್ತರ ಕನ್ನಡ ಜಿಲ್ಲೆಯ ಮಾಗೋಡ ಜಲಪಾತಕ್ಕೆ ಬಾಡಿಗೆಗೆ ಕರೆದೊಯ್ದಿದ್ದ.
ಮಾರ್ಗಮಧ್ಯೆ ಕಾರವಾರ ರಸ್ತೆಯ ಶಿಮ್ಲಾ ನಗರ ಬಳಿ ಮತ್ತಿಬ್ಬರು ಕಾರು ಹತ್ತಿಕೊಂಡಿದ್ದರು. ಜಲಪಾತ ಹತ್ತು ಕಿ.ಮೀ. ಇರುವುದಕ್ಕೆ ಮುಂಚೆ ಕಾರು ನಿಲ್ಲಿಸಿದ್ದ ಮೂವರು, ಗಣೇಶ ಅವರ ಕಣ್ಣಿಗೆ ಖಾರಪುಡಿ ಎರಚಿ ಹಲ್ಲೆ ನಡೆಸಿದ್ದರು. ಮುಖವನ್ನು ಟೋಪಿಯಿಂದ ಮುಚ್ಚಿ, ಕೈಕಾಲುಗಳನ್ನು ಕಟ್ಟಿ ಜೇಬಿನಲ್ಲಿದ್ದ ₹5 ಸಾವಿರ ನಗದು ಹಾಗೂ ಮೊಬೈಲ್ ಕಸಿದುಕೊಂಡಿದ್ದರು. ಕೃತ್ಯವನ್ನು ಪ್ರಶ್ನಿಸಿದ್ದ ಯುವತಿಯನ್ನು ಬೆದರಿಸಿದ್ದರು.
ಅದೇ ವಾಹನದಲ್ಲಿ ಗಣೇಶ ಅವರನ್ನು ವಾಪಸ್ ಕರೆದುಕೊಂಡು ಬಂದು ಅಂಚಟಗೇರಿಯ ಗುಡ್ಡದಕೇರಿ ಬಳಿ ಬಿಟ್ಟು, ಮತ್ತೆ ಮುಂಡಗೋಡಕ್ಕೆ ಹೋಗಿದ್ದರು. ಯುವತಿಯನ್ನು ಬಸ್ ನಿಲ್ದಾಣದಲ್ಲಿ ಇಳಿಸಿ ಕಾರಿನೊಂದಿಗೆ ಪರಾರಿಯಾಗಿದ್ದರು. ಗಣೇಶ ಅವರು ನೀಡಿದ ದೂರಿನ ಮೇರೆಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್‌ಸ್ಪೆಕ್ಟರ್ ಸಚಿನ ಚಲವಾದಿ ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.
ಮೂವರ ವಿರುದ್ಧದ ಆರೋಪ ಸಾಬೀತಾಗಿದ್ದರಿಂದ ನ್ಯಾಯಾಧೀಶ ಬಿರಾದಾರ ದೇವೆಂದ್ರಪ್ಪ ಅವರು, 8 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹20 ಸಾವಿರ ದಂಡ ವಿಧಿಸಿದ್ದರು. ಒಟ್ಟು ದಂಡದ ಪೈಕಿ, ₹50 ಸಾವಿರವನ್ನು ಗಣೇಶ ಅವರಿಗೆ ಹಾಗೂ ಉಳಿದ ₹10 ಸಾವಿರವನ್ನು ಸರ್ಕಾರಕ್ಕೆ ನೀಡಬೇಕು ಎಂದು ಆದೇಶ ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಗಿರಿಜಾ ತಮ್ಮಿನಾಳ ವಾದ ಮಂಡಿಸಿದ್ದರು.
Check Also
ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ
Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …