ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಗೆ ನಾಳೆ ಮಧ್ಯಾಹ್ನ 2 ಗಂಟೆಗೆ ಸಮಯಾವಕಾಶ ನೀಡಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಜುಲೈ 26 ರಂದು ರಾಜ್ಯಪಾಲರ ಭೇಟಿಗೆ ಸಮಯ ನೀಡುವಂತೆ ಸಿಎಂ ಕಚೇರಿಯಿಂದ ಮನವಿ ಮಾಡಲಾಗಿತ್ತು. ಆದ್ರೆ ರಾಜ್ಯಪಾಲರು ನವದೆಹಲಿ ಪ್ರವಾಸದಲ್ಲಿದ್ದ ಕಾರಣ ಸೋಮವಾರ ಭೇಟಿಗೆ ಸಮ್ಮತಿಸಿದ್ದರೂ ಸಮಯ ಅಂತಿಮಗೊಳಿಸಿರಲಿಲ್ಲ.ನಾಳೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಭಾಗಿಯಾಗಲಿರುವ ಸಿಎಂ ಯಡಿಯೂರಪ್ಪ, ನಂತರ ವಿಧಾನಸೌಧದ ತಮ್ಮ ಕಚೇರಿಗೆ ತೆರಳಿ ಕೆಲ ಸಮಯ ಇರಲಿದ್ದಾರೆ. ಈ ವೇಳೆ ಆಪ್ತ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ನೇರವಾಗಿ 2 ಗಂಟೆಗೆ ರಾಜಭವನಕ್ಕೆ ತೆರಳಲಿರುವ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿ ಮಾಡುವರು.ನಾಳಿನ ಸಿಎಂ ರಾಜ್ಯಪಾಲರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ರಾಜೀನಾಮೆ ಬಗ್ಗೆ ಸಿಎಂ ಇನ್ನೂ ಸ್ಪಷ್ಟವಾಗಿ ಏನೂ ಹೇಳಿಲ್ಲ, ಎಲ್ಲವೂ ಹೈಕಮಾಂಡ್ ಸಂದೇಶದ ಮೇಲೆ ನಿರ್ಧಾರ ಎಂದಿದ್ದಾರೆ. ಹಾಗಾಗಿ ನಾಳೆ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಲಿದ್ದಾರಾ ಅಥವಾ ಕೇವಲ ಮಾತುಕತೆ ನಡೆಸಿ ಬರಲಿದ್ದಾರಾ ಎನ್ನುವುದು ಗೊತ್ತಾಗಬೇಕಿದೆ.
Check Also
ಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ
Spread the loveಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ ಹುಬ್ಬಳ್ಳಿ: ಈ ಸಲ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ …