ಪ್ರಚಾರ ಪಡೆಯುವ ಹುನ್ನಾರದ ಪ್ಯಾಕೇಜ್: ಸಿಪಿಐ ಟೀಕೆ
ಹುಬ್ಬಳ್ಳಿ: ಮುಖ್ಯಮಂತ್ರಿ ಘೋಷಿಸಿದ ಪರಿಹಾರದ ಎರಡನೇ ಪ್ಯಾಕೇಜ್ ’ನಾನು ಕೂಡ ಪರಿಹಾರ ಕೊಟ್ಟಿದ್ದೇನೆ‘ ಎಂದು ಹೇಳಿಕೊಂಡು ಅಗ್ಗದ ಪ್ರಚಾರ ಪಡೆಯುವ ಹುನ್ನಾರವಾಗಿದೆ ಎಂದು ಸಿಪಿಐ (ಎಂ) ಜಿಲ್ಲಾ ಸಮಿತಿ ಟೀಕಿಸಿದೆ.
ಹೇಳಿಕೆ ನೀಡಿರುವ ಸಮಿತಿ ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ ‘ಪ್ಯಾಕೇಜ್‌ನಲ್ಲಿ ಶಾಲಾ ಮಕ್ಕಳಿಗೆ ಎಂದಿನಂತೆ ನೀಡುವ ಹಾಲಿನ ಪೌಡರ್ ಮೊತ್ತ ₹100 ಕೋಟಿ ಸೇರಿಸಿ, ಕೋವಿಡ್ ಪ್ಯಾಕೇಜ್ ಎಂದಿದ್ದಾರೆ. ಈ ಮೂಲಕ ಜನರನ್ನು ಯಾಮಾರಿಸಿದ್ದಾರೆ‘ ಎಂದು ದೂರಿದ್ದಾರೆ.
ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ನೋಂದಾಯಿತ ಅಸಂಘಟಿತ ವಿಭಾಗದ ಕಾರ್ಮಿಕರು ಕೇವಲ ಶೇ 4ರಿಂದ 5ರಷ್ಟಿದ್ದು ಆತ್ಮನಿರ್ಭರ ಯೋಜನೆಯಲ್ಲಿ ನೋಂದಾಯಿತ ಬೀದಿಬದಿ ವ್ಯಾಪಾರಿಗಳು ಕೆಲವೇ ಕೆಲವು ಜನ ಮಾತ್ರ ಇದ್ದಾರೆ. ಅವರಿಗೆ ಅಲ್ಪ ಮೊತ್ತದ ಪರಿಹಾರ ಮಾತ್ರ ಸಿಗುತ್ತದೆ. ಆದ್ದರಿಂದ ಯಾವುದೇ ಷರತ್ತುಗಳನ್ನು ವಿಧಿಸದೆ ಕನಿಷ್ಠ ₹10 ಸಾವಿರ ನೆರವು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅರೆಕಾಸಿನ ಮಜ್ಜಿಗೆ: ರಾಜ್ಯದ ಜನರ ಒತ್ತಡಕ್ಕೆ ಮಣಿದು ಎರಡನೇ ಪ್ಯಾಕೇಜ್ ಘೋಷಿಸಲಾಗಿದ್ದು, ಇದು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಿದೆ ಎಂದು ಎಸ್‌ಯುಸಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ ಹೇಳಿದ್ದಾರೆ.
ಮುಖ್ಯಮಂತ್ರಿ ಅವರು ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಮೀನುಗಾರರು, ಅನುದಾನರಹಿತ ಶಾಲಾ ಶಿಕ್ಷಕರು ಸೇರಿದಂತೆ ಕೆಲವು ವಿಭಾಗಗಳ ಜನರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಆದಾಯ ಕಳೆದುಕೊಂಡಿರುವ ಗುತ್ತಿಗೆ ನೌಕರರು, ಅಸಂಘಟಿತ ಕಾರ್ಮಿಕರು, ಕೃಷಿ ಕಾರ್ಮಿಕರು, ಅತಿಥಿ ಉಪನ್ಯಾಸಕರು, ಸಣ್ಣ ಸ್ವಯಂ ಉದ್ಯೋಗಿಗಳು ಹೀಗೆ ಎಲ್ಲರ ಬದುಕನ್ನು ಉಳಿಸುವ ಬದ್ಧತೆಯನ್ನು ಸರ್ಕಾರ ತೋರಿಸಬೇಕು. ಘೋಷಣೆ ಯಾಗಿರುವ ನೆರವು ಆದಷ್ಟು ಬೇಗನೆ ಫಲಾನುಭವಿಗಳಿಗೆ ತಲುಪಬೇಕು ಎಂದು ಆಗ್ರಹಿಸಿದ್ದಾರೆ.