ಹುಬ್ಬಳ್ಳಿ : ರಾಜ್ಯ ದೇವಾಂಗ ಸಂಘ ಬೆಂಗಳೂರು ಹಾಗೂ ಹುಬ್ಬಳ್ಳಿ ದೇವಾಂಗ ಕೇಂದ್ರೀಯ ಸಮಿತಿ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಗರದ ಗೋಕುಲ್ ರಸ್ತೆಯ ಚವ್ಹಾನ್ ಗ್ರೀನ್ ಗಾರ್ಡನ್ ನಲ್ಲಿ ಸೆ. 18 ರಂದು ಬೆಳಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಈ ತಿಳಿಸಿದ ಕೇಂದ್ರೀಯ ಸಮಿತಿ ಅಧ್ಯಕ್ಷ ನಾಗೇಶ ಬಾಪರೆ, ಎಸ್ಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.95ಕ್ಕೂ ಹೆಚ್ಚಿನ ಅಂಕ ಗಳಿಸಿದ ರಾಜ್ಯದ 30 ಜಿಲ್ಲೆಗಳ 150 ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಪುರಸ್ಕರಿಸಲಾಗುತ್ತದೆ. ಅದೇ ರೀತಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ ಎಂದು ಹೇಳಿದರು.
ಸಮಾಜದ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಪ್ರೇರೇಪಿಸುವ ದಿಸೆಯಲ್ಲಿ ರಾಜ್ಯ ದೇವಾಂಗ ಸಂಘವು, 2016ರಿಂದ ಪ್ರತಿಭಾ ಪುರಸ್ಕಾರ ನೀಡಲು ಆರಂಭಿಸಿತು. ಬೆಂಗಳೂರು, ಬಾಗಲಕೋಟ ಜಿಲ್ಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರ್ಯಕ್ರಮ ಉದ್ಘಾಟಿಸುವರು. ಹಂಪಿ ಹೇಮಕೂಟ ಗಾಯತ್ರಿಪೀಠ ಮಹಾಸಂಸ್ಥಾನದ ದಯಾನಂದಪುರಿ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ದೇವಾಂಗ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಕಲಬುರ್ಗಿ ಅಧ್ಯಕ್ಷತೆ ವಹಿಸುವರು. ಮಾಜಿ ಸಿಎಂ ಜಗದೀಶ ಶೆಟ್ಟರ್, ಜವಳಿ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪಘಿ, ರಾಜ್ಯಸಭೆ ಸದಸ್ಯ ಕೆ. ನಾರಾಯಣ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ್ ಅಬ್ಬಯ್ಯ, ಮೇಯರ್ ಈರೇಶ ಅಂಚಟಗೇರಿ ಅತಿಥಿಗಳಾಗಿ ಆಗಮಿಸುವರು.
ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ್ ಶೆಟ್ಟರ್, ಕೇಶವ್ ಪ್ರಸಾದ್, ಬೆಂಗಳೂರು ನೃಪತುಂಗ ವಿವಿ ಉಪಕುಲಪತಿ ಶ್ರೀನಿವಾಸ ಬಳ್ಳಿ, ದೇವಾಂಗ ಬೆಂಗಳೂರು ಸಂಘದ ಅಧ್ಯಕ್ಷ, ನಿವೃತ್ತ ಡಿಜಿಐಪಿ ಡಾ. ಜಿ. ರಮೇಶ್, ವಾಕರಸಾಸಂ ಅಧ್ಯಕ್ಷ ಬಸವರಾಜ ಕೇಲಗಾರ ಸೇರಿದಂತೆ ಹಲವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಕೆ.ಜಿ. ಬ್ಯಾಕೋಡಿ, ರವೀಂದ್ರ ಪಾಟೀಲ, ಮುಕಂದಗೌಡ್ರ ಗುಗ್ಗರಿ, ದೀಪಕ್ ಕರಮರಿ, ವೀರಣ್ಣ ನಿಂಬರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು
