ಧಾರವಾಡ; ವಿಮಾ ಪಾಲಿಸಿ ಹೊಂದಿದ್ದು ಎಮ್ಮೆಯೊಂದು ಕಾಯಿಲೆಯಿಂದ ಮರಣ ಹೊಂದಿದ ಬಗ್ಗೆ ಪೂರಕ ದಾಖಲೆ ಗಳೊಂದಿಗೆ ಮಾಹಿತಿ ನೀಡಿದರೂ , ಪರಿಹಾರ ಪಾವತಿಸದ ವಿಮಾ ಕಂಪೆನಿಗೆ ಇಲ್ಲಿನ ಜಿಲ್ಲಾ ಗ್ರಾಹಕ ವ್ಯವಹಾರಗಳ ಪರಿಹಾರ ಆಯೋಗವು 95 ಸಾವಿರ ರೂ.ದಂಡ ವಿಧಿಸಿದೆ.
ಧಾರವಾಡ ತಾಲೂಕಿನ ನೀರಲಕಟ್ಟಿ ಗ್ರಾಮದ ಮುತ್ತಪ್ಪ ತಪೇಲಿ ಎಂಬುವರು ವಿಮಾ ಪಾಲಿಸಿ ಹೊಂದಿದ್ದ ತಮ್ಮ ಎಮ್ಮೆ ಖಾಯಿಲೆಯಿಂದ ಮರಣಹೊಂದಿದರೂ ಕೂಡ
ಯುನಿವೆರಲ್ ಸೊಂಟೊ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಕಂಪನಿಯವರು ಪರಿಹಾರದ ಹಣ ನೀಡಿಲ್ಲ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ದೂರಿನ ವಿಚಾರಣೆಯನ್ನು ನಡೆಸಿದ ಆಯೋಗವು ಎಮ್ಮೆಯ ಮೇಲಿನ ವಿಮಾ ಮೊತ್ತವನ್ನು ಫಿರ್ಯಾದಿಗೆ ನೀಡುವಲ್ಲಿ ಕರ್ತವ್ಯ ಲೋಪ ಎಸಗಿ ಸೇವಾ ನ್ಯೂನ್ಯತೆ ಮಾಡಿದ ವಿಮಾ ಕಂಪನಿಗೆ 95 ಸಾವಿರ ರೂ.ಗಳ ದಂಡ ವಿಧಿಸಿದೆ. 30 ದಿನಗಳ ಒಳಗಾಗಿ ಆದೇಶ ಪಾಲನೆ ಮಾಡಬೇಕು ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶಪ್ಪ ಕ ಭೂತೆ , ಸದಸ್ಯರಾದ ಪ್ರಭು ಹಿರೇಮಠ ಅವರು ಆದೇಶಿಸಿದ್ದಾರೆ .
