ನಡೆದಾಡುವ ದೇವರು ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅನಾರೋಗ್ಯದ ಬಗ್ಗೆ ಮತ್ತೆ ವದಂತಿ ಹಿನ್ನಲೆಯಲ್ಲಿ ಭಕ್ತರು, ಶಾಸಕರು, ಸಚಿವರು, ಕೆಲ ಸ್ವಾಮೀಜಿಗಳು ಸೇರಿ ಸಾವಿರಾರು ಭಕ್ತರು ಸಿದ್ದೆಶ್ವರ ಸ್ವಾಮೀಜಿ ದರ್ಶನ ಪಡೆದರು, ಇನ್ನು ಜ್ಞಾನಯೋಗಾಶ್ರಮದಿಂದ ಮಾಧ್ಯಮ ಪ್ರಕಟಣೆ ಮೂಲಕ ವದಂತಿಗೆ ಕಿವಿಗೊಡಬೇಡಿ ಎಂದು ಭಕ್ತರಲ್ಲಿ ಮನವಿ ಮಾಡಿದ್ದಾರೆ. ವಿಜಯಪುರ ನಗರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರು ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆ ಹೊರತುಪಡಿಸಿದ್ರೆ, ಆರೋಗ್ಯವಾಗಿಯೇ ಇದ್ದಾರೆ, ಅಲ್ಲದೇ ದಿನನಿತ್ಯ ಆಶ್ರಮಕ್ಕೆ ಭೇಟಿ ನೀಡುವ ತಮ್ಮ ಅನುಯಾಯಿಗಳಿಗೆ ಮತ್ತು ಭಕ್ತರಿಗೆ ದರ್ಶನ ನೀಡುತ್ತಲೇ ಇದ್ದಾರೆ. ಆದ್ರೂ ಅವರ ಅನಾರೋಗ್ಯದ ಬಗ್ಗೆ ಪದೇ ಪದೇ ವದಂತಿಗಳು ಹರಿದಾಡುತ್ತಿದ್ದು, ಭಕ್ತರು ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲ ಮತ್ತು ಅಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷರೂ ಆಗಿರುವ ಬಸವಲಿಂಗ ಶ್ರೀಗಳು ಪ್ರಕಟಣೆ ಹೊರಡಿಸಿದ್ದಾರೆ. ಇನ್ನು ಅಪಾರ ಪ್ರಮಾಣದಲ್ಲಿ ಭಕ್ತರು ಆಶ್ರಮಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ಭಕ್ತರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಎಂದಿನಂತೆ ಮಧ್ಯಾ1 ಗಂಟೆಗೆ ಭಕ್ತರಿಗೆ ದರ್ಶನ ನೀಡಿದ ನಂತರ ಸಿದ್ದೇಶ್ವರ ಶ್ರೀಗಳು ವಿಶ್ರಾಂತಿಗೆ ತೆರಳಿದರು. ಈ ಮಧ್ಯೆ ಭಕ್ತರಲ್ಲದೇ ಉತ್ತರ ಕರ್ನಾಟಕದ ವಿವಿಧ ಸ್ವಾಮೀಜಿಗಳು, ಶಾಸಕರು ಹಾಗೂ ಸಚಿವರು ಮಾಜಿ ಸಚಿವರು, ಶಾಸಕರು ಗಣ್ಯರು ಸಹ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದು ಆರೋಗ್ಯ ವಿಚಾರಿಸಿದರು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಿದ್ದೇಶ್ವರ ಸ್ವಾಮೀಜಿ ಅವರ ದರ್ಶನ ಪಡೆದು ಆರೋಗ್ಯ ವಿಚಾರಿಸಿದ ನಂತರ, ಭಕ್ತರು ವದಂತಿಗಳಿಗೆ ಕಿವಿಗೊಡಬಾರದು, ಶ್ರೀಗಳು ಆರೋಗ್ಯದಿಂದ ಇದ್ದಾರೆ ಎಂದರು. ಅವರೊಂದಿಗೆ ಭೇಟಿ ನೀಡಿದ ನಾನು ನೈತಿಕ ಶಿಕ್ಷಣದ ಕುರಿತಾಗಿ ಸೆಮಿನಾರ್ ಆಯೋಜನೆ ಸೇರಿದಂತೆ ಇನ್ನಿತರ ವಿಚಾರಗಳ ಕುರಿತಾಗಿ ಚರ್ಚಿಸಿದ್ದೇನೆ, ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯದಲ್ಲಿ ನೈತಿಕ ಶಿಕ್ಷಣ ಅಳವಡಿಸಲಾಗುವುದು ಎಂದರು. ಇನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಎಂಎಲ್‌ಸಿ ಅರುಣ ಶಹಾಪೂರ ಸಾಥ್ ನೀಡಿದರು. ಸಿಂದಗಿ ಶಾಸಕ ರಮೇಶ ಭೂಸನೂರ ಸಹ ಭೇಟಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಮುಗಳಖೋಡ, ಪಂಚಮಸಾಲಿ ಸಮಾಜದ ಮೂರನೆ ಪೀಠ ಆಲಗೂರ ಬೃಹನ್ಮಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಶ್ರೀಗಳು ಸಹ ಭೇಟಿ ನೀಡಿ ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದರು
