ಹುಬ್ಬಳ್ಳಿ : ಕೊರೋನಾ ಮಹಾಮಾರಿ ನಡುವೆಯೂ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಲ್ಲಿ ತೊಡಗಿಕೊಂಡಿದ್ದು, ಆದರೆ ಇದೀಗ ಬೀಜ, ಗೊಬ್ಬರದ ಬೆಲೆ ದಿಡೀರ್ ಏರಿಕೆಯಾಗಿ ರೈತರಿಗೆ ನೋವಿನ ಮೇಲೆ ಬರೆ ಎಳೆದಂತೆ ಆಗಿದೆ.
ಹುಬ್ಬಳ್ಳಿ ತಾಲ್ಲೂಕಿನಲ್ಲಿ
ಕೊರೋನಾ ಲಾಕ್ ಡೌನ್ ಸೇರಿದಂತೆ ಇನ್ನಿತರ ಆರ್ಥಿಕ ಮುಗ್ಗಟ್ಟಿನ ನಡುವೆಯೂ ಜೂನ್ ಮೊದಲ ವಾರ ಧಾರಾಕಾರ ಮಳೆಯಾದ ಹಿನ್ನಲೆಯಲ್ಲಿ ರೈತರು ಸಾಲಸೋಲ ಮಾಡಿ ಹೊಲಗಳನ್ನು ಹದಮಾಡಿ ಇಟ್ಟು, ಇನ್ನೇನು ಭೂ ತಾಯಿಗೆ ಬೀಜ ಹಾಕಬೇಕೆಂಬುದರಲ್ಲಿ ಮಳೆ ಸರಿದು ಹೋಯಿತು. ಈ ಮಧ್ಯೆಯೂ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಜಿಲ್ಲೆಯ ಪ್ರಮುಖ ಬೆಳೆಗಳಾದ ಹತ್ತಿ, ಸೊಯಾಬೀನ್, ಹೆಸರು, ಅಲಸಂದಿ, ತೊಗರಿ, ಹತ್ತಿ, ಸಜ್ಜೆ ಹಾಗೂ ಸೂರ್ಯಕಾಂತಿ ಬಿತ್ತನೆಯಲ್ಲಿ ರೈತರು ತೊಡಗಿದ್ದಾರೆ. ಆದರೆ, ಕೊರೊನಾ ಎಂಬ ಮಹಾಮಾರಿ ಎಪೆಕ್ಟ್ ಮುಂಗಾರು ಬಿತ್ತನೆ ಬೀಜಗಳ ಮೇಲೆ ಬಿದ್ದಂತಾಗಿದೆ.
ಮೊದಲು ಬೀಜಗಳು ಬೆಲೆ ಕಡಿಮೆ ಇತ್ತು ಆದರೆ ಸದ್ಯ ಬೆಲೆ ದುಪ್ಪಟ್ಟು ಆಗಿದೆ. ಗೊಬ್ಬರ ಬೆಲೆಯು ಗಗನಕ್ಕೇರುವುದರಿಂದ ರೈತರಲ್ಲಿ ಆತಂಕ ಮೂಡಿದ್ದು, ರಾಜ್ಯ ಸರ್ಕಾರ ಬೀಜ, ಗೊಬ್ಬರ ಬೆಲೆಗಳನ್ನು ಕಡಿಮೆ ಮಾಡಿ ರೈತರಿಗೆ ಅನುಕೂಲ ಮಾಡಬೇಕು ಪರಿ ಪರಿಯಾಗಿ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ರೈತರು ಮನವಿ ಮಾಡುತ್ತಿದ್ದಾರೆ.
ಮೊದಲೇ ಈ ಹಿಂದೆ ಅತಿಯಾದ ಮಳೆಯಿಂದಾಗಿ ಹಲವು ಬೆಳೆಗಳು ನಾಶವಾಗಿದ್ದು, ಈ ಬಾರಿ ಮುಂಗಾರು ಕೈಹಿಡಿದು ಉತ್ತಮ ಫಸಲು ಬಂದರೆ ಸಾಕು ಎನ್ನುವ ರೈತರು, ಸರಕಾರ ಈ ವರ್ಷ ಆದರೂ ವ್ಯವಸ್ಥಿತವಾಗಿ ಬೆಂಬಲ ಬೆಲೆ ಘೋಷಣೆ ಮಾಡಿ ರೈತರಿಗೆ ತಲುಪುವಂತೆ ಮಾಡಬೇಕೆಂಬುದು ರೈತರ ಅಂಬೋಣವಾಗಿದೆ.
