ಮಕ್ಕಳ ರಕ್ಷಣೆಗಾಗಿಯೇ ಪ್ರತ್ಯೇಕ ಕಾನೂನುಗಳು ಜಾರಿಯಲ್ಲಿವೆ- ಲಾಭೂರಾಮ್
ಹುಬ್ಬಳ್ಳಿ: ‘ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಪೊಲೀಸ್ ಠಾಣೆಯಲ್ಲಿ ತಕ್ಷಣ ದಾಖಲಿಸಿಕೊಂಡು, ತಾರ್ಕಿಕ ಅಂತ್ಯ ನೀಡಲು ಮುಂದಾಗಬೇಕು’ ಎಂದು ಪೊಲೀಸ್ ಕಮಿಷನರ್ ಲಾಭೂರಾಮ್ ಹೇಳಿದರು.
ನವನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಂಗಳವಾರ ನಡೆದ ಮಕ್ಕಳ ಕಲ್ಯಾಣ ಅಧಿಕಾರಿಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಮಕ್ಕಳ ರಕ್ಷಣೆಗಾಗಿಯೇ ಪ್ರತ್ಯೇಕ ಕಾನೂನುಗಳು ಜಾರಿಯಲ್ಲಿವೆ. ಮಕ್ಕಳ ರಕ್ಷಣಾ ಇಲಾಖೆ ಸಹ ಬಾಲನ್ಯಾಯ ಕಾಯ್ದೆಯಡಿ ಕಾರ್ಯ ನಿರ್ವಹಿಸುತ್ತಿದೆ. ಅವರಿಗೆ ಪೊಲೀಸ್ ಇಲಾಖೆ ಪೂರಕವಾಗಿದ್ದಾಗ ಸಮಸ್ಯೆಯಲ್ಲಿದ್ದ ಮಕ್ಕಳಿಗೆ ನೆರವಾಗಲು ಸಾಧ್ಯ’ ಎಂದರು.
‘ಮಕ್ಕಳ ಅಪಹರಣ, ನಾಪತ್ತೆ, ಬಾಲಾಪರಾಧ, ಬಾಲ್ಯ ವಿವಾಹದಂತಹ ಪ್ರಕರಣಗಳು ನಡೆದಾಗ ಸಿಬ್ಬಂದಿ ತಡ ಮಾಡದೆ ಪ್ರಕರಣ ದಾಖಲಿಸಿಕೊಳ್ಳಬೇಕು. ಮಕ್ಕಳಿಗೆ ಸಮಸ್ಯೆಯಾಗದ ರೀತಿಯಲ್ಲಿ ಸೂಕ್ಷ್ಮವಾಗಿ ಕಾನೂನು ಪ್ರಕ್ರಿಯೆ ಮುಗಿಸಬೇಕು. ಬಾಲಾಪರಾಧಿ ಎಂದು ಸಾಬೀತಾದಾಗ ಕಾನೂನು ಪ್ರಕಾರ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಬೇಕು’ ಎಂದು ಹೇಳಿದರು.
ಮಕ್ಕಳ ರಕ್ಷಣಾ ಇಲಾಖೆಯ ಉಪನಿರ್ದೇಶಕಿ ಡಾ.ಎಚ್.ಎಚ್. ಕುಕನೂರ ಮಾತನಾಡಿ, ‘ಬಾಲ್ಯ ವಿವಾಹ ತಡೆಯಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಮಕ್ಕಳು ತಮ್ಮ ಹಕ್ಕುಗಳ ಪರ ಧ್ವನಿ ಎತ್ತುವ ಶಕ್ತಿ ತುಂಬಬೇಕಿದೆ’ ಎಂದರು.
ಜಿಲ್ಲಾ ಮಕ್ಕಳ ರಕ್ಷಣ ಇಲಾಖೆ ಕಾನೂನು ಸಲಹೆಗಾರರಾದ ನೂರ್‌ಜಹಾನಾ ಕಿಲ್ಲೇದಾರ ಅವರು, ಮಕ್ಕಳ ರಕ್ಷಣೆ ಹಾಗೂ ಬಾಲನ್ಯಾಯ ಕಾಯ್ದೆ ಕುರಿತು ಮಾಹಿತಿ ನೀಡಿದರು.