Breaking News

ಧಾರ್ಮಿಕ ಗುರುತುಗಳನ್ನು ಶಾಲಾ – ಕಾಲೇಜುಗಳಲ್ಲಿ ಬಳಸುವಂತಿಲ್ಲ

Spread the love

ಬೆಂಗಳೂರು: ಹಿಜಬ್​-ಕೇಸರಿ ವಿವಾದದಿಂದಾಗಿ ಮುಚ್ಚಲಾಗಿದ್ದ ಶಾಲಾ-ಕಾಲೇಜುಗಳನ್ನು ತಕ್ಷಣಕ್ಕೆ ಜಾರಿಯಾಗುವಂತೆ ಆರಂಭಿಸಬೇಕು. ಅಂತಿಮ ತೀರ್ಪು ಬರುವವರೆಗೂ ವಿದ್ಯಾರ್ಥಿಗಳು ಹಿಜಾಬ್ ​- ಕೇಸರಿ ಶಾಲನ್ನು ಧರಿಸಿ ಶಾಲೆಗೆ ಬರುವಂತಿಲ್ಲ ಎಂದು ಹೈಕೋರ್ಟ್​ ಸೂಚಿಸಿದೆ.
ಪ್ರಕರಣದ ಕುರಿತು ಶೀಘ್ರವೇ ತೀರ್ಪು ನೀಡಲಾಗುವುದು. ಅಲ್ಲಿಯವರೆಗೂ ರಾಜ್ಯದಲ್ಲಿ ಯತಾಸ್ಥಿತಿ ಕಾಪಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್​ ಅವಸ್ಥಿ ಮಧ್ಯಂತರ ತೀರ್ಪು ನೀಡಿ ಆದೇಶಿಸಿದ್ದಾರೆ. ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ: ಸೋಮವಾರ ಮಧ್ಯಾಹ್ನ 2:30ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಮುಂದಿನ ಆದೇಶದವರೆಗೆ ಯಾವುದೇ ಧಾರ್ಮಿಕ ಗುರುತುಗಳನ್ನು ಶಾಲಾ – ಕಾಲೇಜುಗಳಲ್ಲಿ ಬಳಸುವಂತಿಲ್ಲ. ಕಾಲೇಜು ಆಡಳಿತ ಮಂಡಳಿ ಸೂಚಿಸಿದ ಸಮವಸ್ತ್ರದಲ್ಲೇ ವಿದ್ಯಾರ್ಥಿಗಳು ಶಾಲೆಗೆ ಬರಬೇಕು ಎಂದು ಹೈಕೋರ್ಟ್​ ಮೌಖಿಕವಾಗಿ ತಿಳಿಸಿದೆ.
ಅಲ್ಲದೆ, ವಿವಾದದ ಕಾರಣಕ್ಕಾಗಿ ಶಾಲೆಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಪಡಿಸುವಂತಿಲ್ಲ. ಪ್ರಕರಣದ ಕುರಿತು ಅಂತಿಮ ತೀರ್ಪು ಬರುವವರೆಗೂ ಶಾಲಾ-ಕಾಲೇಜುಗಳು ನಿರಂತರವಾಗಿ ನಡೆಯಲಿ. ಯಾವುದೇ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಹಿಜಾಬ್​ ಮತ್ತು ಕೇಸರಿ ಶಾಲು ಧರಿಸುವಂತಿಲ್ಲ ಎಂದು ಹೈಕೋರ್ಟ್​ ಸೂಚಿಸಿದೆ. ಪ್ರಕರಣದ ಕುರಿತು ಆದೇಶ ಮಾಡುವವರೆಗೆ ವಕೀಲರ ವಾದ ಮತ್ತು ನ್ಯಾಯಾಲಯದ ಅಭಿಪ್ರಾಯಗಳನ್ನು ವರದಿ ಮಾಡದಂತೆ ಮಾಧ್ಯಮ ಪ್ರತಿನಿಧಿಗಳಿಗೆ ಸಿಜೆ ರಿತುರಾಜ್ ಅವಸ್ಥಿ ಮನವಿ ಮಾಡಿದರು.
ಪ್ರಕರಣದ ಬಗ್ಗೆ ಕೋರ್ಟ್​ ಸವಿಸ್ತಾರ ವಾದ ಆಲಿಸಿದ ಬಳಿಕ ಅಂತಿಮ ತೀರ್ಪು ನೀಡಲಿದೆ. ಅಲ್ಲಿಯವರೆಗೂ ಸಾಮಾಜಿಕ ಸ್ವಾಸ್ಥ್ಯ ಮತ್ತು ಜನರಲ್ಲಿ ಯಾವುದೇ ಗೊಂದಲ ಉಂಟಾಗದಿರಲು ಪ್ರಕರಣ ಬಗ್ಗೆ ಮಾಧ್ಯಮಗಳು ವರದಿ ಬಿತ್ತರಿಸದಿರಲು ಸಿಜೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಭಾರಿ ವಿವಾದವೆಬ್ಬಿಸಿರುವ ಹಿಜಬ್​ – ಕೇಸರಿ ಶಾಲು ಪ್ರಕರಣ ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್​ ಅವಸ್ಥಿ ನೇತೃತ್ವದ ವಿಸ್ತೃತ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಸರ್ಕಾರದ ಪರ ಪ್ರಭುಲಿಂಗ ನಾವದಗಿ, ಸಂಜಯ್​ ಹೆಗಡೆ, ಶಾಲಾ ಸಮಿತಿ ಪರವಾಗಿ ಪೂವಯ್ಯ ಅವರು ವಾದ ಮಂಡಿಸಿದರೆ, ಅರ್ಜಿದಾರರ ಪರವಾಗಿ ದೇವದತ್ತ ಕಾಮತ್​, ಮೊಹಮದ್​ ತಾಹಿರ್​ ವಾದ ಮಂಡಿಸಿದರು.
ಮುಖ್ಯ ನ್ಯಾಯಮೂರ್ತಿ ರಿತುರಾಜ್​ ಅವಸ್ಥಿ, ನ್ಯಾ.ಖಾಜಿ ಜೈಬುನ್ನೀಸಾ, ನ್ಯಾ.ಕೃಷ್ಣ ಎಸ್​ ದೀಕ್ಷಿತ್​ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಶಾಲಾ ಕಾಲೇಜುಗಳಲ್ಲಿ ಹಿಜಬ್​ ಧರಿಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಯುತ್ತಿದೆ.ಫೆ.8, 9 ರಂದು ಎರಡು ದಿನಗಳ ಕಾಲ ನ್ಯಾಯಮೂರ್ತಿ ಕೃಷ್ಣ ಎಸ್​.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠದಿಂದ ಹಿಜಬ್​ ಕುರಿತ ಅರ್ಜಿಗಳ ವಿಚಾರಣೆ ನಡೆದ ಬಳಿಕ ಪ್ರಕರಣ ಧರ್ಮ ಸೂಕ್ಷ್ಮವಾದ ಕಾರಣ ಇದನ್ನು ನ್ಯಾಯಮೂರ್ತಿಗಳು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದರು. ಇದೀಗ ಮೂವರು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಹಿಜಾಬ್​ ಕುರಿತ ಅರ್ಜಿಗಳ ವಿಚಾರಣೆ ನಡೆಯಿತು.
ಶಾಲೆಗಳನ್ನು ಬೇಗ ಆರಂಭಿಸಲು ಸಿಜೆ ಸಲಹೆ: ಹಿಜಬ್​ ವಿವಾದದ ಕಾರಣಕ್ಕಾಗಿ ಶಾಲೆಗಳನ್ನು ಸ್ಥಗಿತಗೊಳಿಸ ಸರ್ಕಾರದ ವಿರುದ್ಧ ಸಿಜೆ ಬೇಸರ ವ್ಯಕ್ತಪಡಿಸಿ, ಇದಕ್ಕಾಗಿ ಶಿಕ್ಷಣವನ್ನು ಸ್ಥಗಿತ ಮಾಡುವುದು ಸರಿಯಲ್ಲ. ಶಾಲೆಗಳನ್ನು ಬೇಗನೇ ಆರಂಭಿಸಿ. ಹಿಜಾಬ್​ ವಿವಾದದ ಕಾರಣಕ್ಕಾಗಿ ಮಕ್ಕಳನ್ನು ಶಿಕ್ಷಣದಿಂದ ದೂರು ಇಡುವುದು ಸರಿಯಲ್ಲ ಎಂದು ಸಿಜೆ ರಿತುರಾಜ್​ ಅವಸ್ಥಿ ಹೇಳಿದರು.ಇದನ್ನು ಸರ್ಕಾರದ ಪರ ವಕೀಲರು ಒಪ್ಪಿಕೊಂಡಿದ್ದಾರೆ. ಇದೇ ವೇಳೆ, ಅರ್ಜಿದಾರರ ಪರ ವಕೀಲ ಕಾಮತ್​ ಸ್ಕಾರ್ಫ್​​ ಧಾರ್ಮಿಕ ಆಚರಣೆಯ ಭಾಗ ಅಲ್ಲ ಇದು ಮೂಲಭೂತ ಹಕ್ಕು ಎಂದು ವಾದ ಮಂಡನೆ ಮಾಡಿದರು. ಈ ಸಂಬಂಧ ಮಧ್ಯಂತರ ಆದೇಶಕ್ಕೂ ಒತ್ತಾಯಿಸಿದ್ದರು.
ನಾಳೆಯೇ ಶಾಲೆ ಆರಂಭಿಸಿ-ಕೋರ್ಟ್: ಶಾಲೆಯನ್ನು ನಾಳೆಯಿಂದ ಆರಂಭಿಸಲೇಬೇಕು. ಹಿಜಬ್​- ಕೇಸರಿ ಪ್ರಕರಣದ ಬಗ್ಗೆ ತೀರ್ಪು ಬರುವವರೆಗೂ ರಾಜ್ಯದಲ್ಲಿ ಶಾಂತಿ, ಯಥಾಸ್ಥಿತಿ ಕಾಪಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಹೈಕೋರ್ಟ್​ ಸೂಚಿಸಿದೆ.


Spread the love

About Karnataka Junction

    Check Also

    ತಾವು ಬೇಸಿಗೆಯ ರಜೆಗಾಗಿ ವಿಶೇಷ ರೈಲುಗಳ ಸಂಚಾರ ಮಾಹಿತಿ ಇಲ್ಲಿದೆ

    Spread the loveಹುಬ್ಬಳ್ಳಿ: ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮುಜಾಫರ್ಪುರ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಎರಡು ಹೆಚ್ಚುವರಿ …

    Leave a Reply

    error: Content is protected !!