ಫ್ಲೈಓವರ್ ನಿರ್ಮಾಣಕ್ಕಾಗಿ ನಗರದ ಮಹಾ ಪಾಲಿಕೆ ಕಚೇರಿ ಎದುರಿನ ಬಿಆರ್‌ಟಿಎಸ್ ಬಸ್ ನಿಲ್ದಾಣ ಸ್ಥಳಾಂತರ ಮಾಡಬೇಕಾದ ಹಿನ್ನೆಲೆಯಲ್ಲಿ ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.ಫ್ಲೈಓವರ್ ನಿರ್ಮಾಣಕ್ಕೆ ಪಾಲಿಕೆ ಮುಂಭಾಗದ ಬಿಆರ್‌ಟಿಎಸ್ ಬಸ್ ನಿಲ್ದಾಣ ತೊಡಕಾಗಿದ್ದು, ಇದನ್ನು ತೆರವುಗೊಳಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ ಹಿನ್ನೆಲೆಯಲ್ಲಿ ಬಿಆರ್ ಟಿಎಸ್ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು. ಅಲ್ಲಿರುವ ಬಸ್ ನಿಲ್ದಾಣವನ್ನು ಚಿಟಗುಪ್ಪಿ ಆಸ್ಪತ್ರೆ ಎದುರಿನ ಪಾಲಿಕೆ ವಾಣಿಜ್ಯ ಕಟ್ಟಡ ಮುಂಭಾಗಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದು, ಈ ಸ್ಥಳ ಎಷ್ಟು ಸೂಕ್ತ ಎನ್ನುವ ಕುರಿತು ಪರಿಶೀಲನೆ ನಡೆಸಿದರು.
ಈ ಮೊದಲು ಗದಗ ರಸ್ತೆಯ ಫ್ಲೈಓವರ್ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಎಲ್‌ಐಸಿ ಕಚೇರಿ ಮುಂಭಾಗದಿಂದ ಆರಂಭವಾಗಲಿದ್ದು, ಸುಮಾರು 150 ಮೀಟರ್ ರ್‍ಯಾಂಪ್ ವಾಲ್ ಬರಲಿದೆ ಎಂದು ನಿರ್ಧರಿಸಲಾಗಿತ್ತು. ಆದರೆ ಇದೀಗ ಈ ಯೋಜನೆಯನ್ನು ಒಂದಿಷ್ಟು ಮಾರ್ಪಾಡು ಮಾಡಿದ್ದು, ಚಿಟಗುಪ್ಪಿ ಪಾರ್ಕ್ ಮುಂಭಾಗದಿಂದ ನಿರ್ಮಿಸಲು ತಯಾರಿ ನಡೆದಿದೆ. ಪಾರ್ಕ್ ಮುಂಭಾಗದಿಂದಲೇ ರ್‍ಯಾಂಪ್ ವಾಲ್ ನಿರ್ಮಾಣವಾಗುವ ಹಿನ್ನೆಲೆಯಲ್ಲಿ ಪಾಲಿಕೆ ಕಚೇರಿ ಮುಂಭಾಗದ ಬಸ್ ನಿಲ್ದಾಣ ತೆರವುಗೊಳಿಸುವ ಅನಿವಾರ್ಯತೆ ಎದುರಾಗಿದೆ. ಪರಿಶೀಲನೆ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಎಇಇ ವಿಜಯಕುಮಾರ ಹಾಗೂ ಬಿಆರ್‌ಟಿಎಸ್ ಅಧಿಕಾರಿಗಳು ಮುಂತಾದರಿದ್ದರು.