ಧಾರವಾಡ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ಸಾರ್ವಜನಿಕರು ಸುರಕ್ಷಿತವಾಗಿರಲು, ಆರೋಗ್ಯ ರಕ್ಷಣಾ ಕ್ರಮಗಳನ್ನು ಸ್ವಯಂವಾಗಿ ಅನುಸರಿಸುವುದಕ್ಕಾಗಿ ಜಾಗೃತಿ ಮೂಡಿಸಲು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಅವರು ಜಂಟಿಯಾಗಿ ಸಂಚರಿಸಿ, ಮಾಸ್ಕ್ ಧರಿಸದವರಿಗೆ ಎಚ್ಚರಿಕೆ ನೀಡಿ, ಉಚಿತವಾಗಿ ಮಾಸ್ಕ್ ವಿತರಿಸಿದರು.
ಬೆಳಿಗ್ಗೆ 10-30 ರ ಸುಮಾರಿಗೆ ಧಾರವಾಡ ನಗರದ ವಿವೇಕಾನಂದ ವೃತ್ತದಿಂದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಪೊಲೀಸ್ ಆಯುಕ್ತ ಲಾಬೂರಾಮ ಅವರು ಕಾಲ್ನಡಿಗೆಯಲ್ಲಿ ಸಂಚರಿಸಿ ಸ್ಟೇಶನರಿ ಶಾಪ್, ಕಿರಾಣಿ ಅಂಗಡಿ, ಹೋಟೆಲ್, ಬಟ್ಟೆ ಅಂಗಡಿ ಸಲೂನ್ ಶಾಪ್, ಜ್ಯುವೆಲರಿ ಶಾಪ್, ಮಾಂಸದ ಅಂಗಡಿ ಸೇರಿದಂತೆ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ, ಅಂಗಡಿಗಳಲ್ಲಿ ಸ್ಯಾನಿಟೈಜರ್ ಇಡಲು ಮತ್ತು ಸಾಮಾಜಿಕ ಅಂತರದೊಂದಿಗೆ ವ್ಯಾಪಾರ ಮಾಡುವಂತೆ ತಿಳಿಸಿದರು. ಅಂಗಡಿಗೆ ಬರುವ ಪ್ರತಿಯೊಬ್ಬ ಗ್ರಾಹಕರು ಮಾಸ್ಕ್ ಧರಿಸಿರುವಂತೆ ಎಚ್ಚರಿಕೆ ವಹಿಸುವುದು ಅಂಗಡಿ ಮಾಲೀಕರ ಜವಾಬ್ದಾರಿ, ನಿಯಮ ಉಲ್ಲಂಘಿಸಿದಲ್ಲಿ ಅಂಗಡಿ ಸೀಜ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಿದ ನಂತರ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದಿಂದ ವಿವಿಧ ಕಾರಣಗಳಿಂದಾಗಿ ಜನರು ನಗರ ಮಾರುಕಟ್ಟೆ ಪ್ರದೇಶಕ್ಕೆ ಬರುತ್ತಾರೆ. ಅವರಿಗೂ ಮಾಸ್ಕ್ ಧಾರಣೆ ಮಹತ್ವ ತಿಳಿಸಿ, ಜಾಗೃತಿ ಮೂಡಿಸಲು ಸ್ವತ: ಬಂದಿದ್ದೇನೆ. ನಿಯಮ ಪಾಲನೆ ಮಾಡದ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ನಿಯಮ ಪಾಲಿಸದವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಜರುಗಿಸಲಾಗುವುದು.
ಮಾಸ್ಕ್ ಧರಿಸದವರಿಗೆ ಕೋವಿಡ್ ಗಂಭೀರತೆ ಅರ್ಥೈಸುವ ಸಲುವಾಗಿ ಅವರಿಗೆ ಎಚ್ಚರಿಕೆ ನೀಡಿ, ಉಚಿತವಾಗಿ ಮಾಸ್ಕ್ ವಿತರಿಸಿದ್ದೇನೆ ಎಂದರು.
ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ ಅವರು ಮಾತನಾಡಿ, ಇಂದಿನ ಮಾಸ್ಕ್ ಅಭಿಯಾನದಲ್ಲಿ ಶೇ.90 ರಷ್ಟು ಜನ ಮಾಸ್ಕ್ ಧರಿಸಿರುವುದು ಕಾಣುತ್ತಿದೆ. ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆ. ಕೊವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳುವಂತೆ ಪೆÇಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಯುಕ್ತರು ವಿವೇಕಾನಂದ ವೃತ್ತ, ಸುಭಾಸ ರಸ್ತೆ, ಕೆ.ಸಿ.ಸಿ. ಬ್ಯಾಂಕ್ ಸರ್ಕಲ್, ಗಾಂಧಿ ಚೌಕ, ಸುಪರ್ ಮಾರ್ಕೆಟ್, ರೀಗಲ್ ಸರ್ಕಲ್, ಸಿಬಿಟಿ ಬಸ್ ನಿಲ್ದಾಣ, ಅಂಜುಮನ್ ಕಾಲೇಜ ಎದುರಿಗಿನ ರಾಣಾಪ್ರತಾಪಸಿಂಹ ಸರ್ಕಲ್‍ವರೆಗೆ ಕಾಲ್ನಡಿಗೆಯಲ್ಲಿ ಸಂಚರಿಸಿ, ಸ್ವತ: ಮಾಸ್ಕ್ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದರು.
ಇವರೊಂದಿಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದೀನಕರ, ಆರ್‍ಸಿಎಚ್‍ಓ ಡಾ.ಎಸ್.ಎಂ. ಹೊನಕೇರಿ, ಸಂಚಾರಿ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಮಲ್ಲನಗೌಡ ನಾಯ್ಕರ, ಸಿವಿಲ್ ಡಿಫೆನ್ಸ್ ಚೀಫ್ ವಾರ್ಡನ್ ಡಾ.ಸತೀಶ್ ಇರಕಲ್, ವಾರ್ಡನ್‍ಗಳಾದ ಕಿರಣ ಹಿರೇಮಠ, ಡಾ. ಉಮೇಶ್ ಹಳ್ಳಿಕೇರಿ, ಎಂ.ಎಂ. ಮುಮ್ಮಿಗಟ್ಟಿ, ಅಶೋಕ ಕುದರಿಮನಿ, ಪ್ರವೀಣ ದೇಶಪಾಂಡೆ ಸೇರಿದಂತೆ ಸದಸ್ಯರು, ಇತರ ಅಧಿಕಾರಿಗಳು ಭಾಗವಹಿಸಿದ್ದರು.